Home ಮಲೆನಾಡು ಜ.15-19: ಶಿವಮೊಗ್ಗದಲ್ಲಿ ಅಂತರ‌್ರಾಷ್ಟ್ರೀಯ ನಾಟಕೋತ್ಸವ

ಜ.15-19: ಶಿವಮೊಗ್ಗದಲ್ಲಿ ಅಂತರ‌್ರಾಷ್ಟ್ರೀಯ ನಾಟಕೋತ್ಸವ

0
SHARE
(ಸಾಂದರ್ಭಿಕ ಚಿತ್ರ)
ಶಿವಮೊಗ್ಗ: ಶಿವಮೊಗ್ಗ ರಂಗಾಯಣದ ವತಿಯಿಂದ ಇದೇ ಮೊದಲ ಬಾರಿಗೆ ಸುವರ್ಣ ಸಂಸ್ಕೃತಿ ಭವನದಲ್ಲಿ ಜ. 15ರಿಂದ 19 ರವರೆಗೆ ಪ್ರತಿದಿನ ಸಂಜೆ ೬.೩೦ಕ್ಕೆ  ಅಂತರ‌್ರಾಷ್ಟ್ರೀಯ ನಾಟಕೋತ್ಸ ಆಯೋಜಿಸಲಾಗಿದೆ ಎಂದು ರಂಗಾಯಣ ಆಡಳಿತಾಧಿಕಾರಿ ಮಂಗಲಾ ವೆಂ. ನಾಯಕ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಜ.೧೫ರಂದು ಸಂಜೆ ೬ ಗಂಟೆಗೆ ನಾಟಕೋತ್ಸವವನ್ನು ರಂಗಕರ್ಮಿ ಕೆ.ವಿ. ಅಕ್ಷರ ಉದ್ಘಾಟಿಸಲಿದ್ದಾರೆ.  ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ, ಪರಿಷತ್ ಸದಸ್ಯಎಂ.ಬಿ. ಭಾನುಪ್ರಕಾಶ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಹಾಗೂ ಶಿವಮೊಗ್ಗ ರಂಗಾಯಣದ ಪ್ರಭಾರ ನಿರ್ದೇಶಕರಾದ ಬಲವಂತರಾವ್ ಪಾಟೀಲ್ ಪಾಲ್ಗೊಳ್ಳಲಿದ್ದಾರೆ ಎಂದರು.
ನಾಟಕೋತ್ಸವದಲ್ಲಿ ಜ. ೧೫ರಂದು ಭಾಸ ಮಹಾಕವಿಯ ಸಂಸ್ಕೃತ ನಾಟಕ  ಮಧ್ಯಮ ವ್ಯಾಯೋಗಂ ಅನ್ನು ತಿರುವನಂತಪುರ, ಕೇರಳದ ಸೋಪಾನಂ ತಂಡ ಪ್ರಸ್ತುತಪಡಿಸಲಿದ್ದು, ಸಂಗೀತ ಹಾಗೂ ವಿನ್ಯಾಸದೊಂದಿಗೆ ಕಾವಲಂ ನಾರಾಯಣ ಪಣಿಕ್ಕರ್ ನಿರ್ದೇಶಿಸಿದ್ದಾರೆ ಎಂದ ಅವರು,  ಜ.೧೬ರಂದು  ಲಂಡನ್‌ನ ವರ್ಜು ಆರ್ಟ್ಸ್ ಥಿಯೇಟರ್ ಕಂಪನಿಯು ಓಲ್ಯುಕ್ಯುಲಿ ಕೊಡ್ಜಕ್ಕುಲಿ ನಿರ್ದೇಶನದ ಮಜ್ನೂ- ಮ್ಯಾಡ್ ಮ್ಯಾನ್ ಇನ್ ಲವ್ ಎಂಬ ಇಂಗ್ಲಿಷ್ ನಾಟಕವನ್ನು ಪ್ರಸ್ತುತಪಡಿಸಲಿದೆ ಎಂದರು.
ಜ.೧೭ರಂದು ಜಮ್ಮು ಕಾಶ್ಮೀರದ ಅಮಚೂರ್ ಥಿಯೇಟರ್ ಗ್ರೂಪ್ ಖಾಲಿದ್ ಹುಸೇನ್‌ರವರ ರಚನೆಯ ಉರ್ದು ನಾಟಕ ಇಷ್ಕ್ ಮಲಂಗಿ ಪ್ರದರ್ಶಿಸಲಿದೆ. ಪ್ರೀತಂ ಕಟೋಚ್‌ರವರ ರಂಗರೂಪವನ್ನು ಮುಷ್ತಾಕ್ ಕಕ್ ನಿರ್ದೇಶಿಸಿದ್ದಾರೆ.
ಜ. ೧೮ರಂದು ನೀನಾಸಂ ತಂಡವು ಭವಭೂತಿ ರಚನೆಯ ಮಾಲತಿ ಮಾಧವ ಸಂಸ್ಕೃತ ನಾಟಕವನ್ನು ಪ್ರದರ್ಶಿಸಲಿದ್ದು, ರಂಗರೂಪದೊಂದಿಗೆ ಅನುವಾದಿಸಿ ಕೆ.ವಿ .ಅಕ್ಷರ ನಿರ್ದೇಶಿಸಿದ್ದಾರೆ ಎಂದರು.
ಜ. ೧೯ರಂದು ರವೀಂದ್ರನಾಥ ಠಾಗೋರ್‌ರವರ ಚಿತ್ರಾ ನಾಟಕ ಪ್ರದರ್ಶಿಲ್ಪಡುತ್ತಿದ್ದು, ಸುಧಾ ಅಡುಕುಳರವರು ಕನ್ನಡಕ್ಕೆ ಅನುವಾದಿಸಿದ್ದಾರೆ. ನಾಟಕದ ವಿನ್ಯಾಸ, ಸಂಗೀತ, ನಿರ್ದೇಶನ ಡಾ. ಶ್ರೀಪಾದ ಭಟ್‌ರವರದ್ದು.  ಸುಧೀರ್ ಕಡವೂರು ನಾಟಕಕ್ಕೆ ಮಾರ್ಗದರ್ಶನ ನೀಡಿದ್ದಾರೆ ಎಂದವರು ಮಾಹಿತಿ ನೀಡಿದರು.
ನಾಟಕೋತ್ಸವದ ಸಮಾರೋಪ ಜ. ೧೯ರಂದು ನಡೆಯಲಿದ್ದು, ರಂಗಕಲಾವಿದ, ಚಲನಚಿತ್ರ ನಟ ಸುಂದರರಾಜ್ ಸಮಾರೋಪ ನುಡಿಗಳನ್ನಾಡಲಿದ್ದು, ಅತಿಥಿಗಳಾಗಿ ಶಾಸಕರಾದ ಆರ್. ಪ್ರಸ್ನಕುಮಾರ್ ಉಪಸ್ಥಿತರಿರುವರು ಎಂದರು.
ನಾಟಕೋತ್ಸವದ ಯಶಸ್ಸಿಗಾಗಿ ನಗರದ ಹಿರಿಯ ರಂಗಕರ್ಮಿಗಳನ್ನೊಳಗೊಂಡ ಸಂಚಲನಾ ಸಮಿತಿಯನ್ನು ರಚಿಸಲಾಗಿದ್ದು, ದೇಶ-ವಿದೇಶಗಳಿಂದ ಬರುವ ಕಲಾವಿದರ ಆತಿಥ್ಯ, ವಸತಿ, ಸುವರ್ಣ ಸಂಸ್ಕೃತಿ ಭವನದ ಅಲಂಕಾರ, ನಾಟಕಗಳಿಗೆ ಅಗತ್ಯ ಪರಿಕರಗಳೂ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಪೂರ್ಣಗೊಳಿಸಲಾಗಿದೆ ಎಂದರು.
ನಾಟಕೋತ್ಸವದ ಪ್ರತಿ ನಾಟಕಕ್ಕೆ ೩೦ ರೂ.  ಪ್ರವೇಶ ಶುಲ್ಕವಿದ್ದು, ರಂಗಾಯಣ ಕಚೇರಿ, ಶ್ರೀನಿಧಿ ಸಿಲ್ಕ್ಸ್ ಅಂಡ್ ಟೆಕ್ಸ್ ಟೈಲ್ಸ್, ಮಲೆನಾಡು ಮೀಡಿಯಾ ಕಛೇರಿ, ದುರ್ಗಿಗುಡಿಯ ಶ್ರೀ ಲಕ್ಷ್ಮೀ ವೆಂಕಟೇಶ್ವರ ಅಯ್ಯಂಗಾರ್ ಬೇಕರಿ, ವಿನೋಬನಗರ ಸವಿಬೇಕರಿಗಳಲ್ಲಿ ಟಿಕೆಟ್ ಲಭ್ಯವಿದ್ದು, ನಾಟಕಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ  ಅವರು ಕೋರಿದರು.
ಕಲಾವಿದರ ಒಕ್ಕೂಟದ ಲಕ್ಮ್ಮೀನಾರಾಯಣ್, ಸಂಚಲನಾ ಸಮಿತಿಯ ವೈದ್ಯ, ಡಾ. ಸಾಸ್ವೆಹಳ್ಳಿ ಸತೀಶ್, ಆರ್.ಎಸ್. ಹಾಲಸ್ವಾಮಿ, ಹೊನ್ನಾಳಿ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.
Facebook Comments

LEAVE A REPLY

+ 88 = ninety six