Home ಲೇಖನಗಳು ಅಪ್ಪ-ಮಗನ ಕಿತ್ತಾಟ: ಸೈಕಲ್ ಚಿಹ್ನೆಗಾಗಿ ಜಗ್ಗಾಟ

ಅಪ್ಪ-ಮಗನ ಕಿತ್ತಾಟ: ಸೈಕಲ್ ಚಿಹ್ನೆಗಾಗಿ ಜಗ್ಗಾಟ

0
SHARE
ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿರುವ ಹಾಗೂ ರಾಜಕೀಯವಾಗಿಯೂ ಮಹತ್ವ ಪಡೆಯುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ದಿನಾಂಕ ನಿಗದಿಯಾಗಿದೆ. 403 ಸದಸ್ಯಬಲದ ವಿಧಾನಸಭೆಗೆ ಜನವರಿ 17ರಿಂದ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಲಿದೆ. 224 ಜನಪ್ರತಿನಿಧಿಗಳನ್ನು (224 ಇದು ಕರ್ನಾಟಕದ ಒಟ್ಟು ವಿಧಾನಸಭೆಯ ಸಂಖ್ಯಾಬಲದಷ್ಟು) ಹೊಂದಿರುವ ಉತ್ತರ ಪ್ರದೇಶದ ಆಡಳಿತರೂಢ ಸಮಾಜವಾದಿ ಪಕ್ಷಕ್ಕೆ ಅಪ್ಪ ಮಗನ ಜಗಳದಲ್ಲಿ ಪಕ್ಷದ “ಸೈಕಲ್” ಚಿಹ್ನೆ ಯಾವ ಬಣದ ಪಾಲಾಗಲಿದೆ? ಎಂಬ ಸಮಸ್ಯೆ  ಕಗ್ಗಂಟಾಗಿ ಪರಿಣಮಿಸಿದೆ. ಒಂದೆಡೆ ಇತರ ರಾಜಕೀಯ ಪಕ್ಷಗಳು ಚುನಾವಣಾ ತಯಾರಿಯಲ್ಲಿ ತೊಡಗಿದ್ದರೆ ಸಮಾಜವಾದಿ ಪಕ್ಷ ಆಂತರಿಕ ಕಲಹದ ಬೇಗುದಿಯಿಂದ ಹೊರಬರುವುದು ಹೇಗೆ ಎಂಬ ಗೊಂದಲದಲ್ಲಿದೆ.
ಪಕ್ಷ ವಿರೋಧಿ ಚಟುವಟಿಕೆಯ ಕಾರಣ ನೀಡಿ ಮಗ ಅಖಿಲೇಶ್ ಸಿಂಗ್ ಯಾದವ್ ಹಾಗೂ ರಾಮ್ ಗೋಪಾಲ್ ಯಾದವ್‍ರನ್ನು ಪಕ್ಷದಿಂದ ಉಚ್ಛಾಟಿಸುವ ಅಪ್ಪ. ಅದಾದ ಒಂದೇ ದಿನಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ “ನೇತಾಜಿ”, ಮುಲಾಯಂ ಸಿಂಗ್ ಯಾದವ್‍ರ ಒಪ್ಪಿಗೆಯಿಲ್ಲದೆ ರಾಷ್ಟ್ರೀಯ ಕಾರ್ಯಕಾರಣಿಯನ್ನು ಕರೆಯಲಾಗುತ್ತದೆ, ಅಲ್ಲಿ 224 ಜನಪ್ರತಿನಿಧಿಗಳ ಸಂಖ್ಯಾಬಲ ತನಗೇ ಇದೆಯೆಂದು ಅಖಿಲೇಶ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗುತ್ತಾರೆ. ಅಪ್ಪ ಮುಲಾಯಂರನ್ನು ಆ ಸ್ಥಾನದಿಂದ ವಜಾಗೊಳಿಸುತ್ತಾರೆ. ಇದು ಅಧಿಕಾರಕ್ಕಾಗಿ ತಂದೆಯನ್ನು ಸೆರೆಯಲ್ಲಿಟ್ಟು ಸೋದರರನ್ನು ಕೊಂದ ಔರಂಗಜೇಬನ ಇತಿಹಾಸದ ಕಥೆಯಲ್ಲ. ಹಿಂದಿಯಲ್ಲಿ ಪ್ರಕಾಶ್ ಝಾ ನಿರ್ದೇಶಿಸಿದ್ದ ರಾಜ್‍ನೀತಿ ಸಿನಿಮಾಕ್ಕಿಂತಲೂ ರೋಚಕವಾಗಿ ಕಣ್ಣೆದುರಿಗೆ ನಡೆಯುತ್ತಿರುವ ಉತ್ತರ ಪ್ರದೇಶದ ಕ್ಷಿಪ್ರ ಹಾಗೂ ಕೀಳು ರಾಜಕೀಯ ಬೆಳವಣಿಗೆಗಳ ಮೂರ್ತ ರೂಪ.
ಕಳೆದ ಒಂದು ವರ್ಷದಿಂದ ಅಧಿಕಾರಕ್ಕಾಗಿ ಶೀತಲವಾಗಿ ಒಳಗೊಳಗೆ ನಡೆಯುತ್ತಿರುವ ಅಪ್ಪ-ಮಗನ ನಡುವಿನ “ಯಾದವಿ” ಕಲಹ, ಕನಿಷ್ಟ ಪಕ್ಷದೊಳಗೇ ಬಗೆಹರಿಯಬೇಕಿದ್ದ ಮನೆಜಗಳ ಬೀದಿಗೆ ಬಂದು ಸಮಾಜವಾದಿ ಪಕ್ಷಕ್ಕೆ ಯಾರು ನಿಜವಾದ ನಾಯಕ? ಯಾರೊಂದಿಗೆ ಜನಪ್ರತಿನಿಧಿಗಳು ನಿಂತಿದ್ದಾರೆ? ಕೊನೆಗೆ ನೇತಾಜಿ ಎಂದು ಕರೆಸಿಕೊಳ್ಳುವ ಸಮಾಜವಾದಿ ಪಕ್ಷವನ್ನು ಕಟ್ಟಿ ಬೆಳೆಸಿದ ‘ಹಳೆಯ ತಲೆ’ ಮುಲಾಯಂ ಸಿಂಗ್ ಯಾದವ್ ಪಾಲಾಗುವುದೋ ಅಥವಾ ಅವರ ಮಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್ ಅವರಿಗೆ ಪಕ್ಷದ ಸೈಕಲ್ ಚಿಹ್ನೆ ದೊರೆಯಲಿದೆಯೊ? ಈ ಪ್ರಶ್ನೆಗಳ ಗೊಂದಲ ಇದೀಗ ಕೇಂದ್ರ ಚುನಾವಣಾ ಆಯೋಗದ ಅಂಗಣದಲ್ಲಿ ಬಂದು ನಿಂತಿದೆ. ಜನವರಿ 13ರಂದು ಚುನಾವಣಾ ಆಯೋಗ ಯಾವ ನಿರ್ಣಯ ಕೈಗೊಳ್ಳುತ್ತದೆಯೋ ಅದರ ಮೇಲೆ ಸಮಾಜವಾದಿ ಪಕ್ಷದ ಹಾಗೂ ಅಪ್ಪ ಮಗನ ಕಲಹದ ಭವಿಷ್ಯಕ್ಕೆ ಸ್ಪಷ್ಟ ಚಿತ್ರಣ ದೊರೆಯಲಿದೆ. ಅಲ್ಲಿಯವರೆಗೂ ಎಲ್ಲವೂ ಅಸ್ಪಷ್ಟ, ಉತ್ತರಪ್ರದೇಶದ ಆಡಳಿತದಂತೆ ಅರಾಜಕ.
ಸಮಾಜವಾದಿ ಪಕ್ಷದ ಎರಡು ಬಣಗಳ ನಡುವೆ ಉದ್ಭವಿಸಿರುವ ಪಕ್ಷದ ಚಿಹ್ನೆಯ ಸಮಸ್ಯೆಯನ್ನು ಚುನಾವಣಾ ಆಯೋಗ ಹೇಗೆ ಪರಿಹರಿಸಲಿದೆ? ಯಾರಿಗೆ ನೀಡಲಿದೆ ಸೈಕಲ್ ಚಿಹ್ನೆ?
ಚುನಾವಣಾ ಆಯೋಗ ಏನು ಹೇಳುತ್ತದೆ?
ಸರಳವಾಗಿ ಹೇಳುವುದಾದರೆ ಲೋಕಸಭೆ, ರಾಜ್ಯಸಭೆ, ವಿಧಾನಸಭೆಯಂತಹ ಮಹತ್ವದ ಚುನಾವಣೆಗಳನ್ನು ನಡೆಸುವ ಹೊಣೆಹೊತ್ತ ಕೇಂದ್ರ ಚುನಾವಣಾ ಆಯೋಗ, ಚುನಾವಣಾ ಆಯೋಗದಿಂದ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳಿಗೆ ತಮ್ಮ ಕಲಹಗಳನ್ನು ಆಂತರಿಕವಾಗಿಯೇ ಪರಿಹರಿಸಿಕೊಳ್ಳಲು ಅಥವಾ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಲು ಸೂಚಿಸುತ್ತದೆ. ಚುನಾವಣಾ ಆಯೋಗದ ಮಾನ್ಯತೆಯಿರುವ ರಾಜಕೀಯ ಪಕ್ಷದೊಳಗೆ ಅಧಿಕೃತ ಪಕ್ಷದ ಚಿಹ್ನೆಯನ್ನು “ಯಾವ ಬಣಕ್ಕೆ ನೀಡಬೇಕು ಅಥವಾ ಯಾರಿಗೂ ನೀಡಬಾರದು” ಎಂಬ ನಿರ್ಧಾರವನ್ನು ಚುನಾವಣಾ ಆಯೋಗವೇ ಮಾಡುತ್ತದೆ.
ಚುನಾವಣಾ ಆಯೋಗಕ್ಕೆ ಈ ಅಧಿಕಾರ ಎಲ್ಲಿಂದ?
“ಚುನಾವಣಾ ಚಿಹ್ನೆಗಳು(ಮೀಸಲು ಹಾಗೂ ಹಂಚಿಕೆ)ಆದೇಶ, 1968″ರ ಅನ್ವಯ ಕೇಂದ್ರ ಚುನಾವಣಾ ಆಯೋಗಕ್ಕೆ ರಾಜಕೀಯ ಪಕ್ಷಗಳನ್ನು ಮಾನ್ಯಮಾಡುವ ಹಾಗೂ ಅವುಗಳಿಗೆ ಅಧಿಕೃತ ಚಿಹ್ನೆಯನ್ನು ನೀಡುವ ಅಧಿಕಾರವನ್ನು ನೀಡಲಾಗಿದೆ. ಈ ಆದೇಶದ 15ನೇ ಪ್ಯಾರಾ ಪ್ರಕಾರ ಚುನಾವಣಾ ಆಯೋಗದ ಮಾನ್ಯತೆಯಿರುವ ರಾಜಕೀಯ ಪಕ್ಷವೊಂದರ ವಿವಿಧ ಬಣ-ಗುಂಪುಗಳ ನಡುವೆ ಪಕ್ಷದ ಹೆಸರಿಗಾಗಿ ಅಥವಾ ಪಕ್ಷದ ಚಿಹ್ನೆಗಾಗಿ ನಡೆಯುವ ಕಿತ್ತಾಟದಲ್ಲಿ ಯಾರು ನಿಜವಾದ ಹಕ್ಕುದಾದರು ಎಂಬುದನ್ನು ನಿರ್ಧರಿಸುವ ಹಕ್ಕು ಕೇವಲ ಮತ್ತು ಕೇವಲ ಚುನಾವಣಾ ಆಯೋಗಕ್ಕಿದೆ. ಬೇರೆ ಯಾರಿಗೂ ಈ ಅಧಿಕಾರವನ್ನು ನೀಡಲಾಗಿಲ್ಲ.
ಚಿಹ್ನೆಯನ್ನು ಯಾರಿಗೆ ನೀಡಬೇಕು ಅಥವಾ ಯಾರಿಗೂ ನೀಡಬಾರದು ಎಂಬುದನ್ನು ನಿರ್ಧರಿಸುವ ಪ್ರಕ್ರಿಯೆ ಹೇಗೆ?
ಈ ನಿರ್ಣಯಕ್ಕಾಗಿ ಚುನಾವಣಾ ಆಯೋಗ ಮೊದಲು ಚುನಾವಣಾ ವಿಚಾರಣಾ ಸಮಿತಿಯನ್ನು ರೂಪಿಸಿ ಪಕ್ಷದ ಚಿಹ್ನೆಗಾಗಿ (ಅಥವಾ ಹೆಸರಿಗಾಗಿ) ಕಾದಾಡುತ್ತಿರುವ ಬಣಗಳು ಸಲ್ಲಿಸಿರುವ ವಾದ-ಪ್ರತಿವಾದಗಳನ್ನು ಅಧ್ಯಯನಿಸುತ್ತದೆ. ಪಕ್ಷ ರೂಪುಗೊಂಡ ಬಗೆ, ಸಾಂಸ್ಥಿಕ ಸ್ವರೂಪ, ಪಕ್ಷ ಒಟ್ಟಾಗಿದ್ದಾಗ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಿದ್ದ ಗುಂಪು, ವಿವಿಧ ಸಮಿತಿಗಳು ಇತ್ಯಾದಿಗಳ ಕೂಲಂಕುಶ ಅಧ್ಯಯನ ನಡೆಸುತ್ತದೆ. ಅಲ್ಲಿನ ಪ್ರತಿನಿಧಿಗಳು ಯಾರನ್ನು ತಮ್ಮ ನಾಯಕರನ್ನಾಗಿ ಸಮರ್ಥಿಸುತ್ತಾರೆ ಎಂಬುದನ್ನು ಪರಿಗಣಿಸುತ್ತದೆ. ನಂತರ “ಬಹುಮತ” ಇರುವ ಅಂದರೆ ಸಂಘಟನೆಯ ಸಾಂಸ್ಥಿಕ ಬೆಂಬಲ ಹಾಗೂ ಚುನಾಯಿತ ಪ್ರತಿನಿಧಿಗಳ ಬೆಂಬಲ ಯಾರಿಗೆ ಹೆಚ್ಚಿದೆಯೋ ಅವರಿಗೆ ಪಕ್ಷದ ಅಧಿಕೃತ ಚಿಹ್ನೆಯನ್ನು ನೀಡಲಾಗುತ್ತದೆ. ಅಥವಾ ಗೊಂದಲ ಮುಂದುವರೆದರೆ ಚುನಾವಣಾ ಆಯೋಗ ಚಿಹ್ನೆಯನ್ನು ಯಾರಿಗೂ ನೀಡದೆಯೂ ಇರಬಹುದು. ಚುನಾವಣಾ ಆಯೋಗ ಒಮ್ಮೆ ನೀಡುವ ನಿರ್ಣಯವನ್ನು ಎರಡೂ ಬಣಗಳು ಒಪ್ಪಲೇಬೆಕು. ಅದನ್ನು ಮೇಲ್ಮನವಿಯ ಮೂಲಕ ಪ್ರಶ್ನಿಸುವ ಹಕ್ಕು ಯಾರಿಗೂ ಇರುವುದಿಲ್ಲ.
ಬಹುಮತ ಯಾರ ಕಡೆಗಿದೆ ಎಂಬುದು ತಿಳಿಯದೇ ಹೋದರೆ?
ಚುನಾವಣಾ ಆಯೋಗದ ತನಿಖೆಯಲ್ಲಿ ಬಹುಮತ ಯಾವ ಬಣದತ್ತ ಅಥವಾ ಯಾರ ಕಡೆಗಿದೆ ಎಂಬುದನ್ನು ಗುರುತಿಸಲು ಸಾಧ್ಯವಾಗದಿದ್ದರೆ ಅಥವಾ ಎರಡು ಗುಂಪಿನತ್ತಲೂ ಸಮಾನ ಬೆಂಬಲ ವ್ಯಕ್ತವಾಗಿದ್ದರೆ ಆಗ ಮೂಲ ಪ್ರಶ್ನೆ ಹಾಗೆಯೇ ಉಳಿದುಕೊಳ್ಳುತ್ತದೆ. ಅಂತಹ ಸಂಕೀರ್ಣ ಸಂದರ್ಭಗಳಲ್ಲಿ ಚುನಾವಣಾ ಆಯೋಗ ಗಟ್ಟಿ ನಿರ್ಧಾರಕ್ಕೆ ಬರಬೇಕಾಗುತ್ತದೆ. ಆಯೋಗಕ್ಕೆ ಕೂಲಕುಂಶ ಅಧ್ಯಯನ ಹಾಗೂ ತನಿಖೆಗಾಗಿ ಸಮಂiÀi ಬೇಕಿರುವುದರಿಂದ ಚುನಾವಣೆಯ ಈ ಹೊತ್ತಿನಲ್ಲಿ ತಾತ್ಕಾಲಿಕವಾಗಿ ಪಕ್ಷದ ಹಳೆಯ ಚಿಹ್ನೆಯನ್ನು ಅಸಿಂಧುಗೊಳಿಸಿ ಎರಡೂ ಬಣಗಳಿಗೂ ಹೊಸತಾದ ಪ್ರತ್ಯೇಕ ಹೆಸರಿನ ಹಾಗೂ ಪ್ರತ್ಯೇಕ ಚಿಹ್ನೆಗಳ ಅಡಿಯಲ್ಲಿ ಚುನಾವಣೆಯನ್ನು ಸ್ಪರ್ಧಿಸಲು ಆದೇಶಿಸಬಹುದು. ಅಥವಾ ಈಗಿರುವ ಹೆಸರಿನ ಹಿಂದೆ ಅಥವಾ ಮುಂದೆ ಹೆಚ್ಚುವರಿ ಪದಪುಂಜವನ್ನು ಸೇರಿಸಿಕೊಂಡು ಚುನಾವಣೆಯನ್ನು ಸ್ಪರ್ಧಿಸಲು ತಿಳಿಸಬಹುದು. ಉದಾಹರಣೆಗೆ: ಕಾಂಗ್ರೆಸ್(ಜೆ), ಕಾಂಗ್ರೆಸ್(ಒ) ಜನತಾದಳ(ಜಾತ್ಯಾತೀತ) ಇತ್ಯಾದಿ.
ಹಿಂದೆ ಏನಾಗಿತ್ತು? ಹೇಗಾಗಿತ್ತು?
1964ರ ಡಿಸೆಂಬರ್‍ನಲ್ಲಿ ಭಾರತೀಯ ಕಮ್ಯುನಿಷ್ಟ್ ಪಕ್ಷ ಚುನಾವಣಾ ಆಯೋಗಕ್ಕೆ ತೆರಳಿ ತಮ್ಮನ್ನು ಭಾರತೀಯ ಕಮ್ಯುನಿಷ್ಟ್ ಪಕ್ಷ(ಮಾಕ್ರ್ಸಿಸ್ಟ್) ಎಂಬ ಪ್ರತ್ಯೇಕ ಹೆಸರಿನಿಂದ ಮಾನ್ಯಮಾಡಬೇಕೆಂದು ಕೇಳಿಕೊಂಡಿತು. 1951ರ ಪ್ರಜಾಪ್ರತಿನಿಧಿ ಕಾಯ್ದೆಯ “ಚುನಾವಣಾ ಚಿಹ್ನೆಗಳು(ಮೀಸಲು ಹಾಗೂ ಹಂಚಿಕೆ)ಆದೇಶ, 1968″ರ ಆದೇಶ ಜಾರಿಯಾಗಿರದಿದ್ದ ಕಾರಣ ಆಂದ್ರಪ್ರದೇಶ, ಪಶ್ಚಿಮ ಬಂಗಾಳ ಮತ್ತು ಕೇರಳ ಈ ಮೂರು ರಾಜ್ಯಗಳಲ್ಲಿ 4% ಮತ ಪ್ರಮಾಣವಿರುವ ಭಾರತೀಯ ಕಮ್ಯುನಿಷ್ಟ್ ಪಕ್ಷ(ಮಾಕ್ರ್ಸಿಸ್ಟ್) ಪ್ರತ್ಯೇಕ ಪಕ್ಷವಾಗಿ ಮಾನ್ಯಗೊಳಿಸಿತು. 1968ರಲ್ಲಿ ರಾಷ್ಟ್ರಪತಿ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ವಿ.ವಿ.ಗಿರಿಯವರನ್ನು ಅಂದಿನ ಪ್ರಧಾನಿ ಇಂದಿರಾಗಾಂಧಿಯವರು “ಆತ್ಮಸಾಕ್ಷಿ”ಯ ಆಧಾರದಲ್ಲಿ ಕಾಂಗ್ರೆಸ್‍ನ ವಿಪ್ ನಿರಾಕರಿಸುವಂತೆ ಕರೆ ನೀಡಿದ್ದರು. ಆಗ ಕಾಂಗ್ರೆಸ್ ಅಧ್ಯಕ್ಷ ನಿಜಲಿಂಗಪ್ಪ ಇಂದಿರಾಗಾಂಧಿಯವರನ್ನು ಪಕ್ಷದಿಂದ ಉಚ್ಛಾಟಿಸಿದ್ದರು. ಆ ಹೊತ್ತಿಗೆ “ಹಳೆ” ಕಾಂಗ್ರೆಸ್(ಒ) ಹಾಗೂ ಇಂದಿರಾ ನೇತೃತ್ವದ “ಹೊಸ” ಕಾಂಗ್ರೆಸ್(ಜೆ) ಎಂಬುದಾಗಿ ವಿಭಜನೆಗೊಂಡಿತ್ತು. 1987ರಲ್ಲಿ ಎಂ.ಜಿ.ರಾಮಚಂದ್ರನ್ ವಿಧಿವಶರಾದಾಗ ಎಐಡಿಎಂಕೆಯಲ್ಲಿಯೂ ಜಯಲಲಿತಾ ಹಾಗೂ ಜಾನಕಿ ಬಣಗಳ ನಡುವೆ ಜಗಳ ಏರ್ಪಟ್ಟಿತ್ತು. ಚುನಾವಣಾ ಆಯೋಗ ಮಧ್ಯಪ್ರವೇಶಿಸುವ ಮುನ್ನವೇ ಆಂತರಿಕವಾಗಿ ಸಮಸ್ಯೆ ಬಗೆಹರಿದಿತ್ತು. ಇವುಗಳ ನಂತರ ಈಗ ಸಮಾಜವಾದಿ ಪಕ್ಷದೊಳಗಿನ ಜಗಳ ಚುನಾವಣಾ ಆಯೋಗದ ಮೆಟ್ಟಿಲೇರಿದೆ.
ಈಗೇನಾಗಬಹುದು?
ಚುನಾವಣಾ ಆಯೋಗ ಚುನಾವಣಾ ಚಿಹ್ನೆಯ ಸಮಸ್ಯೆಯ ಗೊಂದಲ ಪರಿಹಾರಕ್ಕಾಗಿ ಜನವರಿ 13ರಂದು ಸಭೆ ಸೇರಲಿದೆ. ಜನವರಿ 17ರಂದು ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಲಿದೆ. ಹಾಗಾಗಿ ಅಷ್ಟರೊಳಗೆ ನಿರ್ಣಯ ತೆಗೆದುಕೊಳ್ಳುವಂತೆ ಸಮಾಜವಾದಿ ಪಕ್ಷ ಚುನಾವಣಾ ಆಯೋಗವನ್ನು ಬೇಡುತ್ತಿದೆ. ಸಧ್ಯದ ಪರಿಸ್ಥಿತಿಯಲ್ಲಿ ಸಮಾಜವಾದಿ ಪಕ್ಷದ ಬಣಗಳು ಸಂಧಾನವಾಗದ ಹೊರತು ಒಂದೇ ದಿನದಲ್ಲಿ ನಿರ್ಣಯವನ್ನು ತೆಗೆದುಕೊಳ್ಳುವುದಕ್ಕೆ ಚುನಾವಣಾ ಆಯೋಗಕ್ಕೆ ಸಾಧ್ಯವಾಗದು. ಆದ್ದರಿಂದ ತಾತ್ಕಾಲಿಕವಾಗಿ ಹೆಸರು ಹಾಗೂ ಚಿಹ್ನೆಯನ್ನು ಅಸಿಂಧುಗೊಳಿಸಿ ಹೊಸ ಚಿಹ್ನೆ ಮತ್ತು ಹೆಸರಿನೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಎರಡೂ ಬಣಗಳಿಗೂ ತಿಳಿಸಬಹುದು.
ಮುಂದೊಮ್ಮೆ ಒಟ್ಟಾದರೆ?
ಹೀಗೆ ಎರಡು ಬಣಗಳು ಎರಡು ಪಕ್ಷಗಳಾಗಿ ಚುನಾವಣೆಯನ್ನು ಎದುರಿಸಿ ಸೋಲುವಂತಾದರೆ; ನಿರೀಕ್ಷಿತ ಪ್ರಮಾಣದ ಯಶಸ್ಸು ಸಿಗದಿದ್ದರೆ ಅಂದರೆ ಕೆಟ್ಟು ಬುದ್ಧಿಬಂದರೆ ಅಥವಾ ಕೆಡುವ ಮುನ್ನವೇ ಬುದ್ಧಿ ಬಂದು ಪ್ರತ್ಯೇಕತೆಯ ನಿಶ್ಶಕ್ತಿಯನ್ನು ಮೊದಲೇ ಅರಿತು ಒಗ್ಗಟ್ಟಿನಲ್ಲಿ ಬಲವಿದೆ ಎಂದು ಎರಡೂ ಬಣಗಳು ಒಂದಾಗಿ ಏಕೀಕೃತ ಮಾತೃ ಪಕ್ಷವಾಗಿ ಪರಿಗಣಿಸುವಂತೆ ಚುನಾವಣಾ ಆಯೋಗಕ್ಕೆ ವಿನಂತಿ ಸಲ್ಲಿಸಿದರೆ ಮತ್ತೆ ಮೊದಲಿನಂತೆಯೇ ಮೂಲ ಹೆಸರು ಹಾಗೂ ಚಿಹ್ನೆ ಪಕ್ಷಕ್ಕೆ ದೊರೆಯುವ ಸಾಧ್ಯತೆಯಿರುತ್ತದೆ.
ಇಷ್ಟು ಕ್ಷಿಪ್ರವಾಗಿ ನಡೆದ ಬೆಳವಣಿಗೆಯ ಮುಂದಿನ ಹಂತ ಪಕ್ಷವನ್ನು ತಮ್ಮ ಕೈಗೆತ್ತಿಕೊಳ್ಳುವ ಕಾರ್ಯ. ಅದರ ಮೊದಲ ಹಂತವಾಗಿ ಪಕ್ಷದ ಚುನಾವಣಾ ಚಿಹ್ನೆಯನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವುದು ನಂತರ ಅದನ್ನು ಒಪ್ಪದ ಬಣವನ್ನು ಮೂಲೆಗುಂಪಾಗಿಸುವುದು ಇದರ ಹಿಂದಿನ ಉದ್ದೇಶ. ಪಕ್ಷದ ಅಧಿಕೃತ ಚಿಹ್ನೆ ತಮ್ಮದೆಂದು ವಾದಿಸುತ್ತಿರುವವರ ಮುಂದೆ ಜಗಳಕ್ಕೆ ಸಮಯವಿಲ್ಲ, ಚಿಹ್ನೆ ಪಡೆಯುವ ಪ್ರಯತ್ನದಲ್ಲಿ ಸೋತವರಿಗೆ ಈ ಹೊತ್ತಿನಲ್ಲಿ ಹೊಸ ಪಕ್ಷವನ್ನು ಸ್ಥಾಪಿಸಿ ಸಂಘಟಿಸುವುದು ಅಸಾಧ್ಯದ ಮಾತು. ಯಾಕೆಂದರೆ ಚುನಾವಣೆ ತಲೆ ಮೇಲೆ ಬಂದು ಕುಳಿತಿದೆ. ಹಾಗಾಗಿ ಪಕ್ಷವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ತಮ್ಮ ನಾಯಕತ್ವವನ್ನು ಸಾಬೀತುಪಡಿಸಬೇಕಿರುವುದು ಅಪ್ಪ-ಮಗನ ಮುಂದಿರುವ ಅತಂತ್ರತೆಯ ಸಮಾನ ಸವಾಲು. ಅಖಿಲೇಶ್ ಸೋತರೆ ಭವಿಷ್ಯದಲ್ಲಿ ಹೊಸ ಪಕ್ಷ ರೂಪುಗೊಳ್ಳುವುದಂತು ಸತ್ಯ. ಮುಲಾಯಂ ಸೋತರೆ ಅದು ತಮ್ಮ ತಲೆಮಾರಿನ, ಸಮಾಜವಾದಿ ರಾಜಕಾರಣ ಹಾಗೂ ಪಕ್ಷದಲ್ಲಿನ ಮನ್ವಂತರಕ್ಕೆ ವೇದಿಕೆಯಾಗಲಿದೆ. ಅಪ್ಪ-ಮಗನಲ್ಲಿ ಯಾರೇ ಗೆದ್ದರೂ  ಸಮಾಜವಾದಿ ಪಕ್ಷದಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಈ ಮಧ್ಯೆ ಚುನಾವಣೆಗಾಗಿ ಸಧ್ಯಕ್ಕೆ ಇಬ್ಬರೂ ಹೊಂದಾಣಿಕೆ ಮಾಡಿಕೊಂಡು ನಡೆದರೂ ಒಂದಲ್ಲ ಒಂದು ದಿನ ಬೇಗುದಿಯಂತಿರುವ ಜ್ವಾಲಾಮುಖಿ ಸ್ಫೋಟಗೊಳ್ಳುವುದಂತೂ ಸತ್ಯ.
ಮೊದಲೇ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿರುವ ಅಖಿಲೇಶ್ ಯಾದವ್ ಸರಕಾರಕ್ಕೆ, ಚುನಾವಣೆಯ ಹೊಸ್ತಿಲಿನಲ್ಲಿ ಜನರನ್ನು ಗೊಂದಲಕ್ಕೆ ದೂಡುತ್ತಿರುವ ‘ಎಸ್ಪಿ’ಯ ಆಂತರಿಕ ರಾಜಕೀಯ ಕಿತ್ತಾಟದಿಂದ ಬಿಜೆಪಿ ಹಾಗೂ ಬಿಎಸ್ಪಿ ಪಕ್ಷಗಳಿಗೆ ಲಾಭವಾಗಬಹುದು. ತನ್ನ ಉಚ್ಛಾಟನೆಯನ್ನೇ ರಾಜಕೀಯ ವರ್ಚಸ್ಸಿನ ದಾಳವಾಗಿಸಿಕೊಂಡು ಜನರ ಭಾವನೆ, ಮರುಕ ಹಾಗೂ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ತಮ್ಮ ಕಳಪೆ ಆಡಳಿತ, ಮುಳುಗಿದ ಭರವಸೆಗಳು ಹಾಗೂ ಮಿತಿಗಳನ್ನು ಜನರ ಮನಸ್ಸಿನಿಂದ ತೆಗೆದುಹಾಕಲು ಬಯಸುತ್ತಿರುವ ಮಗನ ಆಸ್ಥೆಯಿಂದ ಅಪ್ಪನೂ ಸೋಲುತ್ತಿದ್ದಾನೆ. ಕಳೆದ ಕೆಲವು ವರ್ಷಗಳ ಸಮಕಾಲೀನ ಚರಿತ್ರೆಯ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದಲ್ಲಿ ಅನಿರೀಕ್ಷಿತ ಸಂಗತಿಗಳೇ ಹೊಸ ನಿರೀಕ್ಷೆಗಳಾಗುತ್ತಿವೆ. ಸಧ್ಯಕ್ಕಂತೂ ಅದೇ ಪರಂಪರೆ ಮುಂದುವರೆಯಲಿದೆ.
–>
untitled-1-copy
ಲೇಖಕರು: ಶ್ರೇಯಾಂಕ ಎಸ್ ರಾನಡೆ
Facebook Comments

LEAVE A REPLY

sixty one + = sixty six